ಜಿಂಕೆಗಳು -
	ಆರ್ಟಿಯೊಡ್ಯಾಕ್ಟಿಲ ಗಣದ ಸರ್ವಿಡೀ ಕುಟುಂಬಕ್ಕೆ ಸೇರಿದ ಸಸ್ಯಾಹಾರಿ ಸ್ತನಿಗಳು. ಇವುಗಳಲ್ಲಿ ಸುಮಾರು 17 ಜಾತಿಗಳಿಗೆ ಸೇರಿದ 53 ಪ್ರಭೇದಗಳಿವೆ. ಕುರುಚಲು ಕಾಡು, ದಟ್ಟವಾದ ಅರಣ್ಯ, ಒಣ ಮರುಭೂಮಿ, ಆರ್ಕ್‍ಟಿಕ್ ಟಂಡ್ರ, ಜೌಗು ಮುಂತಾದ ನೆಲೆಗಳಲ್ಲಿ ಗುಂಪುಗುಂಪಾಗಿ ವಾಸಿಸುತ್ತವೆ.  ಜಿಂಕೆಗಳ ಗಾತ್ರ, ಹೊರರೂಪ, ಜೀವನಕ್ರಮ ಇತ್ಯಾದಿಗಳಲ್ಲಿ ವ್ಯತ್ಯಾಸ ಉಂಟು. ಕೆಲವು ಮೊಲದಷ್ಟು ಚಿಕ್ಕವಾದರೆ ಮತ್ತೆ ಕೆಲವು ಕುದುರೆಯಷ್ಟು ದೊಡ್ಡವಾಗಿವೆ.  ಉದಾಹರಣೆಗೆ ಯೂರೋಪಿನ ಎಲ್ಕ್ ಜಿಂಕೆ 2.5-3ಮೀ. ಉದ್ದ, 2 ಮೀ. ಎತ್ತರವಿದ್ದರೆ ಕಸ್ತೂರಿ ಮೃಗ ಕೇವಲ 1 ಮೀ. ಉದ್ದ ಹಾಗೂ 50-60 ಸೆ.ಮೀ. ಎತ್ತರ ಇದೆ. ಜಿಂಕೆಗಳು ನಾಚಿಕೆ ಸ್ವಭಾವದ ಸಾಧು ಪ್ರಾಣಿಗಳು. ಮುಂಜಾನೆ ಹಾಗೂ ಸಂಧ್ಯಾಕಾಲದಲ್ಲಿ ಹೆಚ್ಚು ಚಟುವಟಿಕೆಯನ್ನು ತೋರಿ, ಮಧ್ಯಾಹ್ನ ಮರದಡಿಗಳಲ್ಲಿ ವಿಶ್ರಮಿಸುತ್ತವೆ. ತಮ್ಮ ಚಂಚಲತೆ, ಮುಗ್ಧತೆ, ಚೆಲುವಾದ ಮೈಮಾಟ ಮುಂತಾದುವುಗಳಿಂದ ಆಕರ್ಷಣೀಯವಾಗಿವೆ. ಇವಕ್ಕೆ ಅಚ್ಚುಕಟ್ಟಾದ ದೇಹ ಹಾಗು ಗಿಡ್ಡಬಾಲವುಂಟು.  ಜಿಂಕೆಗಳ ಮೈಬಣ್ಣ ಕಂದು.  ಮರಿಗಳ ಮೈಮೇಲೆ ಚುಕ್ಕೆಗಳುಂಟು.  ಕೆಲವೊಮ್ಮೆ ಪ್ರೌಢ ಪ್ರಾಣಿಗಳಲ್ಲೂ ಚುಕ್ಕೆಗಳಿರಬಹುದು.  ಉದಾಹರಣೆಗೆ, ಭಾರತದ ಚುಕ್ಕೆಜಿಂಕೆ. ಶರವೇಗದಲ್ಲಿ ಚಲಿಸಲು ಅನುಕೂಲವಾಗುವಂಥ ಸಮಗೊರಸುಳ್ಳ ನೀಳವಾದ ಕಾಲುಗಳಿವೆ.  ಸಾಮಾನ್ಯವಾಗಿ ಜಿಂಕೆಗಳು ನಾಗಾಲೋಟದಿಂದ ಓಡುವಾಗ ಅವುಗಳ ಬಾಲ ನೆಟ್ಟಗೆ ಮೇಲಕ್ಕೆ ಎತ್ತಲ್ಪಡುತ್ತದೆ.  ಜಿಂಕೆಗಳ ಕಾಲುಗಳಲ್ಲಿ ಇರಬೇಕಾದ 5 ಬೆರಳುಗಳಲ್ಲಿ ಮೊದಲನೆಯದು ಇಲ್ಲ. ಉಳಿದವುಗಳಲ್ಲಿ 3 ಮತ್ತು 4ನೆಯ ಬೆರಳುಗಳು 2 ಮತ್ತು 5ನೆಯವುಗಳಿಗಿಂತ ಹೆಚ್ಚು ವೃದ್ಧಿಗೊಂಡು ಗೊರಸುಗಳಾಗಿ ಮಾರ್ಪಟ್ಟಿವೆ. ಜಿಂಕೆಗಳ ಕಣ್ಣುಗಳು ದೊಡ್ಡವು ಹಾಗೂ ಆಕರ್ಷಕ.  ಬಹು ಪಾಲು ಜಿಂಕೆಗಳ ಕಣ್ಣಿನ ಕೆಳಭಾಗದಲ್ಲಿ ಒಂದು ಬಗೆಯ ಗ್ರಂಥಿಗಳಿವೆ.  ಕಿವಿಗಳು ದೊಡ್ಡವು ಮತ್ತು ಚೂಪು ತುದಿಯುಳ್ಳವು. ಜಿಂಕೆಗಳ ಶ್ರವಣ ಮತ್ತು ಘ್ರಾಣ ಸಾಮಥ್ರ್ಯಗಳು ತೀಕ್ಷ್ಣವಾಗಿವೆ.  ಹೀಗಾಗಿ ಇವು ವೈರಿಗಳಿಂದ ಸುಲಭವಾಗಿ ತಪ್ಪಿಸಿಕೊಳ್ಳಬಲ್ಲವು.  ಜಿಂಕೆಗಳ ಹಲ್ಲುಗಳು ಸೊಪ್ಪು, ಹುಲ್ಲು ಮುಂತಾದವನ್ನು ಅಗಿಯಲು ಅನುಕೂಲವಾಗುವಂತೆ ರೂಪುಗೊಂಡಿವೆ.  ಕೆಲವು ಜಾತಿಯ ಗಂಡುಜಿಂಕೆಗಳಲ್ಲಿ ಮೇಲ್ದವಡೆಯ ಕೋರೆಹಲ್ಲುಗಳು ಬೆಳೆದು ದಾಡೆಗಳಂತೆ ಕಾಣುತ್ತವೆ. ಹಲ್ಲುಗಳ ಸಂಖ್ಯೆ 32ರಿಂದ 34ರ ವರೆಗೆ ವ್ಯತ್ಯಾಸವಾಗುತ್ತದೆ. 

	ದಂತ ಸೂತ್ರ  : . ಕೆಲ ಜಿಂಕೆಗಳ ಹೊರತು (ಉದಾಹರಣೆಗೆ ಕಸ್ತೂರಿ ಮೃಗ) ಉಳಿದ ಯಾವ ಜಿಂಕೆಯಲ್ಲೂ ಪಿತ್ತಕೋಶ (ಗಾಲ್ ಬ್ಲಾಡರ್) ಇಲ್ಲ.  ಜಿಂಕೆಗಳ ಜಠರ ನಾಲ್ಕು ಕೋಣೆಗಳುಳ್ಳದ್ದು.  ದನಗಳಂತೆ ಜಿಂಕೆಗಳೂ ಆಹಾರವನ್ನು ಮೆಲುಕು ಹಾಕುತ್ತವೆ. ಇವು ಸಂಪೂರ್ಣ ಸಸ್ಯಾಹಾರಿಗಳು. ಹುಲ್ಲು, ತೊಗಟೆ, ಮರಗಿಡಗಳ ಎಳೆಚಿಗುರು ಇವುಗಳ ಪ್ರಧಾನ ಆಹಾರ.

	ಜಿಂಕೆಗಳಲ್ಲಿ ದನಕರು ಇತ್ಯಾದಿಗಳ ಕೊಂಬಿಗಿಂತ ಭಿನ್ನವಾದ, ವೈಶಿಷ್ಟ್ಯಪೂರ್ಣವಾದ ಕೊಂಬುಗಳಿವೆ. ಪ್ರತಿವರ್ಷ ಪರ್ವಕಾಲದ ತರುವಾಯ ಉದುರಿಹೋಗಿ ಹೊಸದಾಗಿ ಬೆಳೆಯುವ ಈ ತೆರನ ಕೊಂಬುಗಳಿಗೆ ಉದುರುಗೊಂಬು (ಆಂಟ್ಲರ್ಸ್) ಎಂದು ಹೆಸರು. ಇವು ತಲೆಬುರುಡೆಯ ಫ್ರಾಂಟಲ್ಸ್ ಎಂಬ ಎಲುಬಿನ ಬಾಹ್ಯ ಬೆಳೆವಣಿಗೆಗಳು. ಸಾಮಾನ್ಯವಾಗಿ ಹೆಣ್ಣು ಜಿಂಕೆಗಳಲ್ಲಿ ಉದುರುಗೊಂಬುಗಳಿಲ್ಲ. ಆದರೆ ಶೀತವಲಯಗಳಲ್ಲಿ ವಾಸಿಸುವ ಹಿಮಸಾರಂಗಗಳಲ್ಲಿ (ರೈನ್‍ಡಿಯರ್) ಹೆಣ್ಣು ಗಂಡು ಎರಡರಲ್ಲೂ ಚೆನ್ನಾಗಿ ಬೆಳೆದಿರುವ ಉದುರುಗೊಂಬುಗಳುಂಟು. ಚೀನದ ಜಲ ಜಿಂಕೆ (ವಾಟರ್ ಡಿಯರ್) ಹಾಗೂ ಕಸ್ತೂರಿ ಮೃಗಗಳಲ್ಲಿ (ಮಸ್ಕ್‍ಡಿಯರ್) ಗಂಡಿನಲ್ಲಾಗಲಿ ಹೆಣ್ಣಿನಲ್ಲಾಗಲಿ ಉದುರುಗೊಂಬುಗಳೇ ಇಲ್ಲ.  ಪ್ರಾರಂಭದಲ್ಲಿ ಉದುರುಗೊಂಬುಗಳು ಚಿಕ್ಕ ಚಿಕ್ಕ ಉಬ್ಬುಗಂಟುಗಳಂತೆ ತಲೆಯ ಇಕ್ಕಡೆಗಳಲ್ಲಿ ಮೂಡುತ್ತವೆ.  ಇವನ್ನು ಪೆಡಿಕಲ್ಸ್ ಎಂದು ಕರೆಯುತ್ತಾರೆ.  ಪೆಡಿಕಲುಗಳು ಉದುರುಗೊಂಬುಗಳ ಅಸ್ತಿಭಾರ ; ಕೊಂಬು ಮುರಿದುಬಿದ್ದರೂ ಇವು ಮುರಿದು ಬೀಳಲಾರವು. ಆರಂಭದ ಬೆಳೆವಣಿಗೆಯ ಕಾಲದಲ್ಲಿ ಉದುರುಗೊಂಬುಗಳ ಸುತ್ತ ನಯವಾದ ವೆಲ್ವೆಟಿನಂಥ ಚರ್ಮದ ಆವರಣ ಉಂಟು. ಅಲ್ಲದೆ ಒಳಗೆ ಹೆಚ್ಚಿನ ರಕ್ತ ಸಂಚಾರವಿರುತ್ತದೆ. ಈ ಕಾಲದಲ್ಲಿ ಕೊಂಬುಗಳು ಮೃದುವಾಗಿಯೂ ನಯವಾಗಿಯೂ ಇರುತ್ತವೆ.  ಉದುರುಗೊಂಬುಗಳು ಬೆಳೆದಂತೆಲ್ಲ ಕವಲು ಒಡೆಯುತ್ತವೆ.  ಸಂಪೂರ್ಣವಾಗಿ ಬೆಳೆದ ಉದುರುಗೊಂಬುಗಳ ಬುಡದಲ್ಲಿ ಬರ್ ಎಂಬ ಉಂಗುರಾಕಾರದ ರಚನೆ ಕಂಡುಬರುತ್ತದೆ. ಕೊಂಬುಗಳು ಪೂರ್ಣ ಬೆಳೆದ ಅನಂತರ ಕೊಂಬಿನ ಮೇಲಿನ ಚರ್ಮಕ್ಕೆ ರಕ್ತಸಂಚಾರ ನಿಂತು ಹೋಗಿ, ಚರ್ಮ ಕಳಚಿ ಬೀಳುತ್ತದೆ. ಇವು ಜನವರಿಯಿಂದ ಏಪ್ರಿಲ್ ತಿಂಗಳ ನಡುವಣ ಕಾಲದಲ್ಲಿ ಅಂದರೆ ಬೆದೆಕಾಲ ಮುಗಿದ ಅನಂತರ ಉದುರುತ್ತವೆ. ಸಂಪೂರ್ಣ ಉದುರಲು 2-3 ವಾರಬೇಕು. ಹುಟ್ಟಿನ ಮರಿಗಳಲ್ಲಿ ಕೊಂಬುಗಳಿರುವುದಿಲ್ಲ. ಬಾಲ್ಯದ ಪ್ರಥಮ ವರ್ಷದಲ್ಲಿ ಬೆಳೆಯುವ ಉದುರುಗೊಂಬುಗಳು ಕವಲುಗಳಿಲ್ಲದೆ ಸರಳವಾಗಿ ಚೂಪಾಗಿ ಇರುತ್ತವೆ. ಪ್ರಾಯಕ್ಕೆ ಬಂದಂತೆಲ್ಲ ಉದುರುಗೊಂಬುಗಳ ಬೆಳೆವಣಿಗೆಯ ಗತಿ ಅಧಿಕವಾಗುತ್ತದೆ. ಅಲ್ಲದೆ ಕವಲುಗಳೂ ಹೆಚ್ಚಾಗಿರುತ್ತವೆ. ಹೀಗೆ ವಯಸ್ಸು ಹಾಗೂ ತೂಕಕ್ಕೆ ತಕ್ಕಂತೆ ರೂಪುಗೊಳ್ಳುವ ಉದುರುಗೊಂಬುಗಳು ಜಿಂಕೆಗಳ ರಕ್ಷಣೆಗೆ ಹಾಗೂ ಪ್ರಣಯ ಜೀವನಕ್ಕೆ ಸಹಾಯಕವಾಗಿದೆ. ಬೆದೆಗಾಲದಲ್ಲಿ ಹೆಣ್ಣನ್ನು ಪಡೆಯಲು ಗಂಡುಗಳು ನಡೆಸುವ ಹೋರಾಟದಲ್ಲಿ ಒಂದು ಗಂಡಿನ ಉದುರುಗೊಂಬುಗಳು ಇನ್ನೊಂದರ ಕೊಂಬುಗಳ ಕವಲುಗಳಲ್ಲಿ ಬಿಡಿಸಲಾಗದಂತೆ ಸಿಕ್ಕಿಕೊಂಡುಬಿಡುವುದುಂಟು. ಉದುರುಗೊಂಬುಗಳ ಬೆಳೆವಣಿಗೆಗೆ ಕ್ಯಾಲ್ಸಿಯಂನ ಆವಶ್ಯಕತೆಯಿದೆ. ಅಲ್ಲದೆ ವೃಷಣಗಳಿಂದ ಸ್ರಾವವಾಗುವ ಟೆಸ್ಟಸ್ಟೀರೋನ್ ಎಂಬ ಲೈಂಗಿಕ ಹಾರ್ಮೋನಿನ ಪ್ರಚೋದನೆಯಿಂದ ಕೊಂಬುಗಳ ಬೆಳೆವಣಿಗೆ ಆರಂಭವಾಗುತ್ತದೆ.  ಕ್ಲುಪ್ತಕಾಲದಲ್ಲಿ ಈ ಹಾರ್ಮೋನಿನ ಉತ್ಪತ್ತಿಗೆ ಆತಂಕವನ್ನುಂಟುಮಾಡಿದರೆ, ಉದುರುಗೊಂಬುಗಳೇ ಹುಟ್ಟುವುದಿಲ್ಲ.  ಸಂತಾನೋತ್ಪತ್ತಿಯ ಸಾಮಥ್ರ್ಯವನ್ನು ಕಳೆದುಕೊಂಡ ಗೊಡ್ಡು ಗಂಡು ಜಿಂಕೆಗಳಲ್ಲಿ ಉದುರುಗೊಂಬುಗಳ ಬೆಳೆವಣಿಗೆ ಕುಂಠಿತವಾಗಿರುತ್ತದೆ.  ಕೆಲವೊಮ್ಮೆ ಹೆಣ್ಣುಜಿಂಕೆಗಳಲ್ಲಿ ನಿರ್ನಾಳ ಗ್ರಂಥಿಗಳು ಸ್ರವಿಸುವ ಹಾರ್ಮೋನ್‍ಗಳ ಅಸ್ತವ್ಯಸ್ತತೆಯಿಂದಾಗಿ ಚಿಕ್ಕ ಕೊಂಬುಗಳು ಬೆಳೆಯುವುದಿದೆ.  ಜಿಂಕೆ ಮುದಿಯಾದಂತೆಲ್ಲ ಉದುರುಗೊಂಬುಗಳ ಬೆಳೆವಣಿಗೆ ಕುಂಠಿತವಾಗುತ್ತದೆ.  ಜಿಂಕೆಯ ಕೊಂಬುಗಳನ್ನು ಅಲಂಕಾರಕ್ಕಾಗಿ ಹಾಗೂ ಊರುಗೋಲು, ಚಾಕು ಮುಂತಾದವುಗಳ ಹಿಡಿ, ಪಟ್ಟಿಗೆ ಇತ್ಯಾದಿ ಹಲತರದ ವಸ್ತುಗಳ ತಯಾರಿಕೆಗಾಗಿ ಉಪಯೋಗಿಸುತ್ತಾರೆ. ವಾತ ಇತ್ಯಾದಿ ನೋವುಗಳನ್ನು ನಿವಾರಿಸಲು ಕೊಂಬುಗಳನ್ನು ನಿಂಬೆರಸದಲ್ಲಿ ತೇಯ್ದು ಹಚ್ಚುವುದುಂಟು. 

	ಜಿಂಕೆಗಳು ಸಾಮಾನ್ಯವಾಗಿ ದೊಡ್ಡ ಗುಂಪುಗಳಲ್ಲಿ ವಾಸಿಸುತ್ತವೆ. ಕೆಲವು ಬಗೆಯವು ಮಾತ್ರ, ಬೆದೆಕಾಲವನ್ನುಳಿದು, ಮಿಕ್ಕಂತೆ ಒಂಟಿಯಾಗಿ ಜೀವಿಸುತ್ತವೆ. ಉದಾಹರಣೆಗೆ ಎಲ್ಕ್ ಜಿಂಕೆ. ಉಷ್ಣವಲಯದ ಜಿಂಕೆಗಳು ವರ್ಷಕ್ಕೆ ಹಲವು ಬಾರಿ ಬೆದೆಗೆ ಬರುವುವಾದರೂ ಸಮಶೀತೋಷ್ಣ ವಲಯವು ವರ್ಷದ ಯಾವುದಾದರೊಂದು ನಿರ್ದಿಷ್ಟ ಶ್ರಾಯದಲ್ಲಿ, ಸಾಮಾನ್ಯವಾಗಿ ಚಳಿಗಾಲದಲ್ಲಿ, ಬೆದೆಗೆ ಬರುತ್ತವೆ. ಗರ್ಭಾವಸ್ಥೆಯ ಅವಧಿ ಕಸ್ತೂರಿ ಮೃಗಗಳಲ್ಲಿ 160 ದಿವಸಗಳಾದರೆ ಬೇರೆ ಬಗೆಯವಲ್ಲಿ 10 ತಿಂಗಳು. ಹೆಣ್ಣು ಜಿಂಕೆಗಳಲ್ಲಿ 2 ಜೊತೆ ಮೊಲೆಗಳಿವೆ. ಮರಿಗಳ ಸಂಖ್ಯೆ ಸಾಮಾನ್ಯವಾಗಿ ಒಂದು ಸೂಲಿಗೆ ಒಂದು ಅಥವಾ ಎರಡು. ಅಪರೂಪಕ್ಕೆ 3-4 ಮರಿಗಳು ಹುಟ್ಟುವುದೂ ಉಂಟು. ನಿರ್ಬಲವಾದ ಮರಿಯನ್ನು ತಾಯಿ ಕೆಲಕಾಲ ವೈರಿಗಳಿಗೆ ಸಿಗದ ಸ್ಥಳಗಳಲ್ಲಿ ಅಡಗಿಸಿಟ್ಟು ಹಾಲುಣ್ಣಿಸಿ ಸಾಕಿ ಸಲಹುತ್ತದೆ.

	ಜಿಂಕೆಗಳ ಪೂರ್ವೇತಿಹಾಸ: ಸುಮಾರು 25 ಮಿಲಿಯನ್ ವರ್ಷಗಳ ಹಿಂದೆ ಚಿಕ್ಕ ಗೊರಸುಳ್ಳ ಒಂದು ವಂಶದ ಪ್ರಾಣಿಗಳಿಂದ ಜಿಂಕೆಗಳ ಕುಲ ಹುಟ್ಟಿ ಬೆಳೆದು ಬಂದಿತೆಂದು ವಿಜ್ಞಾನಿಗಳ ಅಭಿಪ್ರಾಯ ಉಂಟು. ಜಿಂಕೆಗಳ ಬಲು ಸಮೀಪದ ಪೂರ್ವಜ ಯೂವೊರಿಕ್ಸ್. ಇದು ಆಲಿಗೋಸೀನ್ ಕಲ್ಪದಲ್ಲಿ (40 ದಶಲಕ್ಷ ವರ್ಷ ಪ್ರಾಚೀನದಿಂದ 25 ದ.ಲ. ವರ್ಷ ಪ್ರಾಚೀನದ ವರೆಗಿನ ಅವಧಿ) ವಾಸಿಸುತ್ತಿತ್ತೆಂದು ಹೇಳಲಾಗಿದೆ.  ಜಿಂಕೆಗಳ ಪ್ರಾಗ್ಜೀವನದ ಇತಿಹಾಸವನ್ನು ತಿಳಿಯಪಡಿಸುವ ಪಳಿಯುಳಿಕೆಗಳು ಜಿಂಕೆಗಳ ಜನ್ಮಭೂಮಿ ಏಷ್ಯ ಖಂಡವೆಂಬುದನ್ನು ಖಚಿತಪಡಿಸುತ್ತವೆ.  ಇಲ್ಲಿಂದ ಇತರ ಕಡೆಗಳಿಗೆ ಜಿಂಕೆಯ ಕುಲ ವ್ಯಾಪಿಸಿರಬೇಕೆಂದು ಅಭಿಪ್ರಾಯಪಡಲಾಗಿದೆ.  ಜಿಂಕೆಯ ಪೂರ್ವಜ ಪ್ರಾಣಿಗಳು ಗಾತ್ರದಲ್ಲಿ ಚಿಕ್ಕವಾಗಿದ್ದುವು. ಇಂದಿನ ಕಸ್ತೂರಿಮೃಗ ಹಾಗೂ ಚೀನದ ಜಲಜಿಂಕೆಗಳಂತೆ ಇವುಗಳಲ್ಲೂ ಉದುರುಗೊಂಬುಗಳಿರಲಿಲ್ಲ.  ಆದರೆ ಇವುಗಳಲ್ಲಿ ಕೋರೆಹಲ್ಲುಗಳಿದ್ದುವೆಂದು ತಿಳಿದುಬರುತ್ತದೆ. ಜಿಂಕೆಗಳು ವಿಕಾಸದ ಹಾದಿಯಲ್ಲಿ ಮುಂದುವರಿದಂತೆ ಇವುಗಳ ಗಾತ್ರ ಹೆಚ್ಚುತ್ತ ಬಂತು.  ತಲೆಯಲ್ಲಿ ಬಲಿಷ್ಠವಾದ ಉದುರುಗೊಂಬುಗಳು ಕಾಣಿಸಿಕೊಂಡುವು.

	ಸಾಹಿತ್ಯದಲ್ಲಿ ಜಿಂಕೆ : ಪುರಾಣ ಇತಿಹಾಸ ಇತ್ಯಾದಿಗಳಲ್ಲಿ ಜಿಂಕೆಯ ವರ್ಣನೆ ಅಲ್ಲಲ್ಲಿ ಕಂಡುಬರುತ್ತದೆ. ಜಿಂಕೆಯ ವೇದಮಯವೆಂದೂ ಋಗ್ವೇದ ಹಾಗೂ ಸಾಮವೇದಗಳು ಜಿಂಕೆಯ ದೇಹದಲ್ಲಿ ಅಡಗಿದ್ದುವೆಂದೂ ಜಿಂಕೆಯ ದೇಹದಲ್ಲಿ ಕಂಡುಬರುವ ಬಿಳಿಚುಕ್ಕೆಗಳು ಋಗ್ವೇದದ ಗುರುತುಗಳೆಂದೂ ಕರಿಯ ವರ್ಣ ಸಾಮವೇದದ ಗುರುತುಗಳೆಂದೂ ತೈತ್ತಿರೀಯ ಸಂಹಿತೆಯಿಂದ ತಿಳಿದುಬರುತ್ತದೆ. ಕಾಳಿದಾಸ ತನ್ನ ಕೃತಿಯಲ್ಲಿ ಜಿಂಕೆಗಳನ್ನು ವರ್ಣಿಸಿದ್ದಾನೆ. ಹಲವು ಕಾವ್ಯಗಳಿಂದ ಋಷಿಗಳಿಗೂ ಜಿಂಕೆಗಳಿಗೂ ನಿಕಟವಾದ ಸಂಬಂಧವಿರುವಂತೆ ಕಂಡುಬರುತ್ತದೆ.  ಋಷಿ ಆಶ್ರಮಗಳಲ್ಲಿ ಮುಗ್ಧ ಸ್ವಭಾವದ ಜಿಂಕೆಗಳನ್ನು ಮಕ್ಕಳಂತೆ ಸಾಕುತ್ತಿದ್ದರೆಂದು ತಿಳಿದುಬರುತ್ತದೆ. ರಾಮಾಯಣದಲ್ಲಿ ಜಿಂಕೆಯ ಪಾತ್ರ ಅಪೂರ್ವವಾದುದು.  ಬೇಟೆಯಾಡಲು ಹೊರಟ ದಶರಥನಿಗೆ ಒಮ್ಮೆ ಪ್ರಣಯಿ ಜಿಂಕೆಗಳ ತ್ಯಾಗಮಯ ಮುಗ್ಧ ಪ್ರೇಮ ಮನಕರಗಿಸಿ ಬೇಟೆಯ ಚಟವನ್ನು ತ್ಯಜಿಸುವಂತೆ ಮಾಡಿದುವಂತೆ. ಸೀತೆಯನ್ನು ಮೋಹ ಗೊಳಿಸಲು ಮಾರೀಚ ಮುಗ್ಧ ಮನೋಹರವಾದ ಎಳೆಯ ಮಕ್ಕಳಂತೆ ಹೂಬಳ್ಳಿಗಳಂತೆ ಕರುಣೆಗೆ ಪಾತ್ರವಾದ ಜಿಂಕೆಯ ರೂಪವನ್ನು ತಳೆದನೆಂಬುದು ಗೊತ್ತಿದೆ.

	ಜಿಂಕೆಗಳನ್ನು ಅವುಗಳ ಕೊಂಬು, ಚರ್ಮ, ಮಾಂಸ ಮುಂತಾದವುಗಳಿಗಾಗಿಯೂ, ಅವುಗಳಿಂದ ಬೆಳೆಗಳಿಗೆ ಆಗುವ ಹಾನಿಯನ್ನು ತಡೆಯುವುದಕ್ಕಾಗಿಯೂ, ಹೆಚ್ಚಿನ ಸಂಖ್ಯೆಯಲ್ಲಿ ಬೇಟೆಯಾಡುವುದಿದೆ.  ಇದರಿಂದ ಜಿಂಕೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅಲ್ಲದೆ, ಅಳಿಯುತ್ತಿರುವ ಕಾಡುಗಳಿಂದ ಇವುಗಳ ನೈಸರ್ಗಿಕ ವಾಸಸ್ಥಳ ಕಿರಿದಾಗಿ ಕೆಲತರದ ಜಿಂಕೆಗಳು ಮರೆಯಾಗುತ್ತ ಬರುತ್ತಿವೆ. ಹಲತರದ ಜಿಂಕೆಗಳ ಧಾಮವೆನಿಸಿದ ಭಾರತದಲ್ಲಿ ಇಂದು ಕಾಶ್ಮೀರದ ಕಡವೆಗಳು, ಮಣಿಪುರದ ನಾಟ್ಯಜಿಂಕೆ, ಜವುಗು ಪ್ರದೇಶದ ಜಿಂಕೆ ಇತ್ಯಾದಿಗಳು ಕಣ್ಮರೆಯಾಗುತ್ತ ಬರುತ್ತವೆ. ಜಿಂಕೆಗಳಲ್ಲಿ ಕಡವೆ, ಕೆಂಪುಸಾರಂಗ, ಎಲ್ಕ್, ಚತುಶ್ಶøಂಗಿ, ಚುಕ್ಕೆ ಜಿಂಕೆ, ಕಸ್ತೂರಿಮೃಗ, ಬೊಗಳುವ ಜಿಂಕೆ, ಹಿಮಸಾರಂಗ ಮುಂತಾದ ಪ್ರಮುಖ ಬಗೆಗಳಿವೆ.  ವಿವರಗಳಿಗೆ ಆಯಾಶೀರ್ಷಿಕೆಗಳನ್ನು ನೋಡಿ. 

(ನೋಡಿ- ಕಡವೆ)
(ನೋಡಿ- ಕೆಂಪು-ಸಾರಂಗ)
(ನೋಡಿ- ಎಲ್ಕ್-ಸಾರಂಗ)
(ನೋಡಿ- ಚುಕ್ಕೆಜಿಂಕೆ)
(ನೋಡಿ- ಕಸ್ತೂರಿಮೃಗ)
(ನೋಡಿ- ಬಗಳುಜಿಂಕೆ)					     (ಬಿ.ಅರ್.ಸಿ.ಅರ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ